ದೇಗಾಂವೆ
 ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಕಿತ್ತೂರಿನಿಂದ ಸು. 5 ಕಿಮೀ. ದೂರದಲ್ಲಿದೆ. ಕಲ್ಲಗುಡಿ, ಬಸ್ತಿ ಎಂದು ಕರೆಯುವ ಒಂದು ದೇವಾಲಯ ಗ್ರಾಮದ ಮಧ್ಯದಲ್ಲಿದೆ. ಇದು ಕಮಲಾನಾರಾಯಣ ದೇವಾಲಯ. ಈ ಗುಡಿ 12ನೆಯ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿತವಾಯಿತೆಂಬುದು ಇಲ್ಲಿರುವ ದೇವನಾಗರೀ ಮತ್ತು ಕನ್ನಡ ಲಿಪಿಗಳ ಎರಡು ಶಾಸನಗಳಿಂದ ತಿಳಿದುಬರುತ್ತದೆ. ಗೋವೆಯ ಕದಂಬ ವಂಶದ ಶಿವಚಿತ್ತ ಪೆರ್ಮಾಡಿಯ (1147 - 92) ಹೆಂಡತಿಯಾದ ಕಮಲಾದೇವಿಯ ಇಚ್ಛೆಯ ಮೇರೆಗೆ ಹೂವಿನ ಬಾಗೆಯ ಹೋಸೋಜನ ಮಗ ತಿಪ್ಪೋಜ ಎಂಬ ಸೂತ್ರಧಾರಿ ಇದನ್ನು ನಿರ್ಮಿಸಿದನೆಂದು ಒಂದು ಶಾಸನ ತಿಳಿಸುತ್ತದೆ. ಕಮಲಾದೇವಿ ಬ್ರಾಹ್ಮಣರಿಗೆ ದಾನ ಕೊಟ್ಟ ವಿಷಯ ಇನ್ನೊಂದು ಶಾಸನದಲ್ಲಿದೆ. (1175). 

ಕಲ್ಲಗುಡಿ ವಿಚಿತ್ರ ತಳ ವಿನ್ಯಾಸದ ಕಟ್ಟಡ. ಇದು ಒಂದು ತ್ರಿಕೂಟಾಚಲ. ಆದರೆ ಗರ್ಭಗೃಹಗಳು ಸಾಲಾಗಿ ಒಂದರ ಪಕ್ಕದಲ್ಲೊಂದು ಇವೆ. ಇವುಗಳ ಮುಂದೆ ದಕ್ಷಿಣೋತ್ತರವಾಗಿ ನೇರವಾಗಿ ಹಬ್ಬಿರುವ ಎಂಟು ಕಂಬಗಳ ಎರಡು ಸಾಲುಗಳುಳ್ಳ ಒಂದು ದೊಡ್ಡ ಹಜಾರವುಂಟು. ಹಜಾರದ ಪೂರ್ವದ ಕಡೆ ಉದ್ದಕ್ಕೂ ಕಕ್ಷಾಸನವಿದೆ. ಇದು ಮೇಲೆ ತೆರೆದಂತಿದೆ. ಈ ಭಾಗದ ಮೇಲಿನ ಬಡಾವಣೆ ಇಳಿಜಾರಾಗಿದೆ, ಗರ್ಭಗುಡಿಗಳು ಈ ಹಜಾರದೆಡೆಗೆ ತೆರೆದಂತಿವೆ. ಮಧ್ಯದ ಗರ್ಭಗುಡಿ ಹಜಾರದೊಳಕ್ಕೆ ಸ್ವಲ್ಪ ಮುನ್‍ಸರಿದಂತೆಯೂ ಪಕ್ಕದ ಗರ್ಭಗುಡಿಗಳು ಸುಕನಾಸಿಯಿಂದ ಕೂಡಿ ಹಿಂದಕ್ಕೆ ಚಾಚಿದಂತೆಯೂ ಇವೆ. ಗರ್ಭಗುಡಿಗಳೆಲ್ಲ ಪೂರ್ವಾಭಿಮುಖವಾಗಿದ್ದರೂ ದೇವಾಲಯದ ಪ್ರವೇಶದ್ವಾರ ಹಜಾರದ ಉತ್ತರದ ಗೋಡೆಯಲ್ಲಿದೆ. ದೇವಾಲಯದ ಹೊರಮೈಯಲ್ಲಿ ಅರೆಗಂಬಗಳ ಅಲಂಕರಣ ಮಾತ್ರ ಇದೆ. ದೇವಾಲಯದ ಮೇಲಿನ ಶಿಖರಗಳು ಈಗ ಉಳಿದಿಲ್ಲ. ಆದರೆ ಅವು ಇದ್ದುವೆಂಬುದಕ್ಕೆ ಸೂಚನೆಗಳಿವೆ.

ಗರ್ಭಗುಡಿ, ಸುಕನಾಸಿ ಹಾಗೂ ಪ್ರವೇಶದ್ವಾರದ ಚೌಕಟ್ಟುಗಳ ಬಹು ನಾಜುಕಾದ ಕೆತ್ತನೆಗಳಿಂದ ಕೂಡಿದಂಥವು. ಕಂಬಗಳನ್ನು ತಿರುಗಣೆಯಿಂದ ನಯ ಮಾಡಿದೆ. ಹಜಾರದ ಭುವನೇಶ್ವರಿಗಳು ಆಕರ್ಷಣೀಯವಾಗಿವೆ. ಹಜಾರದಲ್ಲಿ, ಪಕ್ಕದ ಗರ್ಭಗುಡಿಗಳ ಮುಂದಿನ ಅಂಕಣಗಳಲ್ಲಿರುವ ಎರಡು ಭುವನೇಶ್ವರಿಗಳಂತೂ ಒಂದರ ಮೇಲೊಂದರಂತೆ ಏರುವ ಏಕಕೇಂದ್ರ ವೃತ್ತಗಳಿಂದ ಕೂಡಿದ್ದು ಆಳವಾಗಿವೆ. ಅವುಗಳ ಮಧ್ಯದಲ್ಲಿ ಇಳಿಬಿದ್ದ ಕಮಲದ ಅಲಂಕರಣವುಂಟು. ಇವುಗಳ ಸುತ್ತಣ ಅಂಕಣಗಳಲ್ಲೂ ಸ್ಥೂಲವಾಗಿ ಇದೇ ರೀತಿಯ ಭುವನೇಶ್ವರಿಗಳುಂಟು. ಇವೆಲ್ಲ ಅಬು ಬೆಟ್ಟದ ವಿಮಲಷಾ ದೇವಾಲಯದ ಭುವನೇಶ್ವರಿಗಳಂತಿವೆ.

ಉತ್ತರದ ಗರ್ಭಗುಡಿಯಲ್ಲಿ ಮಹಾಕಾಳಿ, ಮಧ್ಯದರಲ್ಲಿ ಲಕ್ಷ್ಮೀನಾರಾಯಣ ಮತ್ತು ದಕ್ಷಿಣದಲ್ಲಿ ಸರಸ್ವತಿ ವಿಗ್ರಹಗಳುಂಟು. ಆದರೆ ಗರ್ಭಗುಡಿಗಳ ದಾಲವಂದಗಳ ಮೇಲೆ ಅನುಕ್ರಮವಾಗಿ ಕಾಳಿ, ಸರಸ್ವತಿ ಮತ್ತು ವಿಷ್ಣು ವಿಗ್ರಹಗಳಿವೆ ದಕ್ಷಿಣ ಮತ್ತು ಮಧ್ಯದ ಗರ್ಭಗುಡಿಗಳ ಮೂಲ ವಿಗ್ರಹಗಳು ಅದಲು ಬದಲಾಗಿರಬಹುದು. ಉತ್ತರ ದ್ವಾರದ ನೇರ ಎದುರಿಗೆ ದಕ್ಷಿಣ ಗೋಡೆಯಲ್ಲಿ ಕೋಷ್ಠವೊಂದುಂಟು. ಅದರಲ್ಲಿ ನಾಗವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ಎಲ್ಲ ವಿಗ್ರಹಗಳೂ ಕಲ್ಯಾಣ ಚಾಳುಕ್ಯ ಶೈಲಿಯ ಉತ್ತಮ ಕೃತಿಗಳು.

	ವಿರಳ ವಿನ್ಯಾಸದಿಂದಲೂ ಸುಂದರ ಶಿಲ್ಪಾಲಂಕರಣದಿಂದಲೂ ಕೂಡಿದ ಈ ದೇವಾಲಯ ಕಲ್ಯಾಣ ಚಾಳುಕ್ಯ ಶೈಲಿಯಿಂದ ಬೆಳೆದ ಕದಂಬ ಉಪಶೈಲಿಯ ಒಂದು ಉತ್ತಮ ವಾಸ್ತುನಿರ್ಮಾಣ.						(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ